ಸಸ್ಯಗಳಲ್ಲಿಯೂ ಹಾರ್ಮೋನ್
ವಸ್ತುವೊಂದು ‘ಸಜೀವಿ’ಯಾಗುವುದು ತನ್ನೊಳಗಿನ ‘ಜೀವಕೋಶ’ಗಳ ಇರುವಿಕೆಯಿಂದ. ಸರಳವಾಗಿ ಹೇಳುವುದಾದರೆ ಜೀವಕೋಶಗಳೆಂಬ ಇಟ್ಟಂಗಿಗಳಿಂದಲೇ ನಮ್ಮ ದೇಹವೆಂಬ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಪ್ರತಿ ಜೀವಕೋಶಕ್ಕೂ ಉಸಿರಾಡುವ, ಶಕ್ತಿ ಸಂಚಯಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಸಾಮರ್ಥ್ಯವಿರುತ್ತದೆ. ಬ್ಯಾಕ್ಟೀರಿಯಾಗಳನ್ನು ಪರಿಗಣಿಸಿ ನರಮಾನವನ ವರೆಗೆ ಎಲ್ಲರೂ ಜೀವಿಸುತ್ತಿರುವುದು ಇದೇ ‘ಕೋಶ’ಗಳಲ್ಲಿ ನಡೆಯುವ ಮೂಲಭೂತ ಕ್ರಿಯೆಯನ್ನು ಆಧರಿಸಿ. ಕೋಶ-ಕೋಶ ಸೇರಿ ಅಂಗಾಂಶವಾಗಿ, ಅಂಗಾಂಶ ಸೇರಿ ಅಂಗವಾಗಿ, ಅಂಗಾಂಗ ಸೇರಿ ಶರೀರವಾದ ಬಹುಕೋಶಿ ಸಸ್ತನಿಗಳಲ್ಲಿ, ಹಾಗೂ ಬಹುತೇಕ ಇದೇ ಮಾದರಿಯ ವ್ಯವಸ್ಥೆ ಹೊಂದಿರುವ ಸಸ್ಯಗಳ ಜೀವನ ಏಕಕೋಶಿಗಳಿಗಿಂತ ಸಂಕೀರ್ಣವಾದದ್ದು. ಕಾರಣ, ಈ ಕೋಶಗಳ ನಡುವಿನ ಸಂಪರ್ಕ ಜಾಲದ ಅಸಾಧರಣ ಕಾರ್ಯ ವಿಧಾನ. ಕೋಶಗಳ ನಡುವೆ ನಡೆಯುವ ಈ ಒಡನಾಟವನ್ನು ಮೊದಲು ಅರ್ಥೈಸಿದ್ದು ಸಸ್ತನಿಗಳಲ್ಲಿ. ರಕ್ತದಲ್ಲಿ ಹರಿದಾಡುವ ಯಾವುದೋ ಒಂದಷ್ಟು ರಾಸಾಯನಿಕ ಸಂಯುಕ್ತಗಳು ಅವುಗಳ ಬೆಳವಣಿಗೆಯನ್ನು ನಿರ್ದೇಶಿಸುತ್ತವೆ ಎಂದು ತಿಳಿದಿದ್ದು 1850 ರ ಹೊತ್ತಿಗೆ. ಇದೇ ರಾಸಾಯನಿಕ ಸಂದೇಶ ವಾಹಕಗಳನ್ನು ನಂತರದಲ್ಲಿ ‘ಪ್ರಚೋದಿಸುವ’ ಎಂಬ ಅರ್ಥವನ್ನು ಕೊಡುವ ‘ಹಾರ್ಮೋನ್’ ಎಂಬ ಗ್ರೀಕ್ ಪದದಿಂದ ಗುರುತಿಸಲಾಯಿತು. ಮಾಹಿತಿಯ ಸರಳ ಲಭ್ಯತೆಯೊಂದಿಗೆ ಈಗ ಹಾರ್ಮೋನ್ ಗಳ ತಿಳುವಳಿಕೆ ಜನ ಸಾಮಾನ್ಯರಲ್ಲೂ ಮೂಡಿದೆ. ವಿಜ್ಞಾನದ ಪ್ರಗತಿಯೊಂದಿಗೆ ಸಸ್ತನಿಗಳ...