ಸಕ್ಯುಲೆಂಟ್ಸ್ - ನಗುಮೊಗದ ಸುಂದರಿಯರು
ಫ್ಯಾಷನ್ ನಂತೆಯೇ ದಿನ ದಿನ ಹೊಸತಾಗುವ ಮತ್ತೊಂದು ಜಗತ್ತು ಗಾರ್ಡನಿಂಗ್. ಇತ್ತೀಚೆಗೆ ಗಾಳಿ ಶುದ್ಧೀಕರಿಸುವ ಸ್ನೇಕ್ ಪ್ಲಾಂಟ್, ಪಾಮ್ಸ್, ಡ್ರೆಸಿನಾ, ಪೀಸ್ ಲಿಲ್ಲಿಯಂತಹ ವಿವಿಧ ಜಾತಿಯ ಸಸ್ಯಗಳೊಡನೆ ಒಳಾಂಗಣ ವಿನ್ಯಾಸಕ್ಕೆ ಹೊಸ ಸೇರ್ಪಡೆ ಸಕ್ಯುಲೆಂಟ್ಸ್. ರಸಭರಿತ ದಪ್ಪ ಎಲೆಯ, ವಿವಿಧ ಆಕಾರದ, ವರ್ಷದ 365 ದಿನ ಸುಂದರವಾಗಿ ಅರಳಿ ನಿಲ್ಲುವ, ವಾರಗಟ್ಟಲೇ ನೀರಿಲ್ಲದೆ ಬದುಕುವ, ಯಾವುದೇ ವಾತಾವರಣವನ್ನು ಜಯಿಸುವ, ಗಟ್ಟಿ ಜಾತಿಯ ಸಕ್ಯುಲೆಂಟ್ಸ್ ಗಳು ಈಗ ಎಲ್ಲರಿಗೂ ಅಚ್ಚುಮೆಚ್ಚು. ಕಡಿಮೆ ನೀರಿನಲ್ಲಿ ಹಸನಾಗಿ ಬೆಳೆಯುವ ಈ ಸಕ್ಯುಲೆಂಟ್ಸ್ ಗಳು, ಗಿಡಗಳ ಹುಚ್ಚಿರುವ ಪದೇ ಪದೇ ಹಳ್ಳಿಯ ಮನೆಗೆ ಪಯಣ ಬೆಳೆಸುವ ನಗರವಾಸಿಗಳಿಗೆ ಹೇಳಿ ಮಾಡಿಸಿದ ಸಸ್ಯಗಳು. ಟೇಬಲ್ ಟಾಪ್’ನಲ್ಲಿ ರಾರಾಜಿಸುವ; ಕಾಫಿ ಮಗ್, ಐಸ್ ಕ್ರೀಮ್ ಬೌಲ್, ಪಿಂಗಾಣಿ ಕಟೋರಿ, ಚಿಕ್ಕ ಮೊಸರು ಗಡಿಗೆಗಳಲ್ಲಿ ಮುದ್ದಾಗಿ ಮಲಗುವ ಸಕ್ಯುಲೆಂಟ್ಸ್ ಗಳು ಗುಲಾಬಿ, ನೇರಳೆ, ನೀಲಿ, ಬೂದಿ, ಕೆಂಪು, ಚಾಕೋಲೇಟ್, ಬಂಗಾರದಂತಹ ವಿಶಿಷ್ಟ ಬಣ್ಣಗಳಲ್ಲಿ ಮನ ಸೆಳೆಯುತ್ತವೆ. ತಾವರೆಯಂತೆ ಒತ್ತಗೆ ಜೋಡಿಸಿದ ದಳಗಳ 'ಇಚಿವೇರಿಯಾ', ಮಣಿ ಮಣಿ ಪೋಣಿಸಿದ ಮುತ್ತಿನ ಹಾರದ ಸ್ಟ್ರಿಂಗ್ ಆಫ್ ಪರ್ಲ್, ಗೊಂಚಲು ಗೊಂಚಲು ಎಲೆಯ ಸೆಡಮ್, ಕುಬ್ಜ ಮರದಂತೆ ಕಾಣುವ ಜೇಡ್, ಥೇಟ್ ಕಲ್ಲಿನಂತೆ ಕಾಣುವ ಲಿಥೋಪ್ಸ್ ಗಳು ಒಳಾಂಗಣ, ಹೊರಾಂಗಣ ಎರಡಕ್ಕೂ ಸೂಕ್ತ. ಮರುಭೂಮಿಯ ಮಕ್ಕಳು ಇಂದು ಜಗತ್ತಿನ ಮೂಲೆ ಮೂಲೆ ಆ...